ಚಪ್ಪಲಿಮೀನು-
ನೋಟಾಪ್ಪರಿಡೀ ಕುಟುಂಬದ ನೋಟಾಪ್ಟರಸ್ ಜಾತಿಯ ನೋಟಾಪ್ಟರಸ್ ಮತ್ತು ಚಿತಾಲ ಎಂಬ ಎರಡು ಮತ್ಸ್ಯಪ್ರಭೇದಗಳಿಗೆ ಇರುವ ಸಾಮನ್ಯ ಹೆಸರು. ಒಳಗುತಟ್ಟೆಮೀನು ಮತ್ತು ಚವಾಳೆ ಪರ್ಯಾಯನಾಮಗಳು. ಸಿಹಿನೀರಿನ ಮೀನುಗಳಾದ ಇವೆರಡೂ ಭಾರತ ಹಾಗೂ ಮಲಯಗಳ ನದಿಗಳು, ಕೆರೆಗಳು ಮತ್ತು ಜಲಾಶಯಗಳಲ್ಲಿ ಕಾಣಸಿಗುತ್ತವೆ. ಕೆಲವು ಸಲ ಅಳಿವೆಗಳಲ್ಲಿನ ಉಪ್ಪುನೀರಿನಲ್ಲೂ ವಾಸಿಸುವುದುಂಟು.

1 1/2'-4' ಉದ್ದಕ್ಕೆ ಬೆಳೆಯುವ ಮೀನುಗಳಿವು. ದೇಹದ ಬಣ್ಣ ಬೆಳ್ಳಿಯಂತೆ. ಚಿತಾಲ ಪ್ರಭೇದದಲ್ಲಿ ಬೆನ್ನುಭಾಗ ಬೂದು ಇಲ್ಲವೆ ಕಂದುಮಿಶ್ರಿತ ತಾಮ್ರವರ್ಣದ್ದಾದರೆ ನೋಟಾಪ್ಟರಸ್ ಬಗೆಯಲ್ಲಿ ಬೂದುಬಣ್ಣದ ಮಚ್ಚೆಗಳುಂಟು. ಎರಡು ಬಗೆಗಳಲ್ಲೂ ಒಂದೇ ಒಂದು ಚಿಕ್ಕ ಬೆನ್ನು ಈಜುರೆಕ್ಕೆ. ಒಟ್ಟಿಗೆ ಸೇರಿಕೊಂಡಿರುವ ಗುದದ ಈಜುರೆಕ್ಕೆ ಹಾಗೂ ಬಾಲದ ಈಜುರೆಕ್ಕೆಗಳು ಮತ್ತು ಚಿಕ್ಕಗಾತ್ರದ ಉದರದ ಈಜು ರೆಕ್ಕೆಗಳು ಇವೆ. ಚಿತಾಲ ಬಗೆಯ ಚಪ್ಪಲಿಮೀನಿನ ಬೆನ್ನು ಗೂನುರೀತಿಯಲ್ಲಿ ಬಾಗಿದೆ. ಎರಡು ಬಗೆಗಳಲ್ಲೂ ಮೇಲ್ದವಡೆ ಮತ್ತು ಕೆಳದವಡೆಗಳಲ್ಲಿ ಎರಡು ಸಾಲಿನಲ್ಲಿ ಜೋಡಣೆಗೊಂಡ ಹಲ್ಲುಗಳಿವೆ. ಬಾಯಂಗಳದಲ್ಲೂ ನಾಲಗೆಯ ಮೇಲೂ ಹಲ್ಲುಗಳಿರುವುದುಂಟು. ದೇಹದ ಮೇಲೆಲ್ಲ ಸೈಕ್ಲಾಯ್ಡ್ ಮಾದರಿಯ ಶಲ್ಕಗಳಿವೆ. ತಲೆ ಹಾಗೂ ಕಪೋಲದ ಮೇಲಿನ ಶಲ್ಕಗಳು ದೇಹದ ಇನ್ನಿತರ ಭಾಗಗಳ ಶಲ್ಕಗಳಿಗಿಂತ ಚಿಕ್ಕವು. ಉದರದ ಏಣಿನ ಮೇಲೆ 29-51 ಹಲ್ಲುಗಳಿರುವುದರಿಂದ ಈ ಭಾಗ ಗರಗಸದಂತೆ ಕಾಣುತ್ತದೆ.

ಚಪ್ಪಲಿಮೀನು ಮಾಂಸಾಹಾರಿ. ಇತರ ಜಾತಿಯ ಮೀನುಗಳನ್ನು ತಿಂದು ಜೀವಿಸುತ್ತದೆ. ಇದರಿಂದಾಗಿ ಬೇರೆ ಜಾತಿಯ ಮೀನುಗಳನ್ನು ಸಾಕುವಾಗ ಈ ಮೀನು ಇರದಂತೆ ನೋಡಿಕೊಳ್ಳಬೇಕು. ಚಪ್ಪಲಿಮೀನಿನ ಸಂತಾನೋತ್ಪತ್ತಿಯ ಶ್ರಾಯ ಮಳೆಗಾಲ. ಒಂದು ಹೆಣ್ಣು ಒಂದು ಸಲಕ್ಕೆ 200-1000 ಮೊಟ್ಟೆಗಳನ್ನಿಡುತ್ತದೆ.

ಚಪ್ಪಲಿಮೀನನ್ನು ಹಸಿಯಾಗಿ ಇಲ್ಲವೆ ಒಣಗಿಸಿ ತಿನ್ನುತ್ತಾರೆ. ಇದರಿಂದ ತಯಾರಿಸಲಾಗುವ ಸಾರನ್ನು ದಡಾರದಿಂದ ನರಳುವವರಿಗೆ ಕೊಡಲಾಗುತ್ತದೆ.
(ಬಿ.ಎಚ್.ಎಂ.; ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ